Tuesday, 10 January 2012

ಪಾ(ತ)ಕಿಸ್ಥಾನದ ಧ್ವಜ ಹಾರಿಸಿದ ಪಾತಕಿಗಳು : ರಾಮ ಸೈನಿಕರ ಮತ್ತೊಂದು ರಾವಣ ಮುಖ ಅನಾವರಣ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ದೇಶಪ್ರೇಮದ ಹೆಸರಿನಲ್ಲಿ ಈ ರಾಷ್ಟ್ರದ ಸುಂದರ ಜಾತ್ಯಾತೀತ ಮೌಲ್ಯಗಳಿಗೆ ಮಸಿ ಬಳಿಯುವ ಏನೆಲ್ಲಾ ಒಳ ಸಂಚುಗಳು ನಡೆಯುತ್ತಿವೆ ಎಂಬುದಕ್ಕೆ ಬಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಇತ್ತೀಚೆಗೆ ನಡೆದ ಪಾಕ್ ಧ್ವಜ ಹಾರಾಟ ಪ್ರಕರಣ ಮತ್ತೊಂದು ಸಾಕ್ಷಿಯಾಗಿ ನಿಲ್ಲುತ್ತದೆ.
ಇಡೀ ವಿಶ್ವವೇ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಮಿಂದೇಳುತ್ತಿರುವಾಗ ದೇಶಪ್ರೇಮದ, ಅದರಲ್ಲೂ ಈ ದೇಶದ ಬಹುಸಂಖ್ಯಾತ ಹಿಂದೂ ಸಮುದಾಯದ ರಕ್ಷರೆಂಬ ಹಣೆಪಟ್ಟಿ ಕಟ್ಟಿಕೊಂಡು ತಮ್ಮ ರಾಕ್ಷಸೀ ಕೃತ್ಯವನ್ನು ಅನಾವರಣಗೊಳಿಸುತ್ತಲೇ ಬಂದ ಶ್ರೀರಾಮ ಸೇನೆ ಎಂಬ ರಾವಣ ರಕ್ಕಸರು ಬಿಜಾಪುರ ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಪಾ(ತ)ಕಿಸ್ಥಾನದ ಧ್ವಜವನ್ನು ಹಾರಿಸಿ ವರ್ಷದ ಮೊದಲ ದಿನವೇ ದೇಶದಲ್ಲಿ ರಕ್ತಪಾತವನ್ನು ನಡೆಸಲು ನಡೆಸಿದ ಸಂಚನ್ನು ಪೊಲೀಸ್ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಸಕಾಲದಲ್ಲಿ ಈ ದೇಶದ ಜನತೆಗೆ ಸೂಕ್ತ ಸಂದೇಶವನ್ನೇ ರವಾನಿಸಿದ್ದಾರೆ.
ಬಿಜೆಪಿ ಕೃಪಾಕಟಾಕ್ಷದಲ್ಲೇ ಬೆಳೆದು, ಈ ದೇಶದ ಜನರನ್ನು ಜಾತಿ-ಮತದ ಆಧಾರದಲ್ಲಿ ವಿಭಜಿಸಿ, ಬಿಜೆಪಿ ಅಧಿಕಾರಕ್ಕೆ ಬರಲು ಬೇಕಾದ ಎಲ್ಲ ರೀತಿಯ ಮತೀಯ, ಜಾತೀಯವಾದದ ಕಸರತ್ತುಗಳನ್ನು ಅಧಿಕಾರ ಪೂರ್ವದಲ್ಲಿ ನಡೆಸುತ್ತಲೇ ಬಂದ ಹಿಂದೂ ಪರ ಮತೀಯ ಉಗ್ರ ಸಂಘಟನೆಗಳು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಂತ್ರ ದಂಡವೇ ವಿಷ ಸರ್ಪವಾಗಿ ಮಾರ್ಪಟ್ಟ ವಿದ್ಯಾಮಾನಗಳು ನಡೆದಿವೆ. ಅಧಿಕಾರಕ್ಕೆ ಬಂದ ಬಳಿಕ ಇಂತಹ ಮತೀಯ ಸಂಘಟನೆಗಳ ಸಮಾಜ ಬಾಹಿರ ಕೃತ್ಯಗಳನ್ನು ಹದ್ದು ಬಸ್ತಿನಲ್ಲಿಡಲು ಬಿಜೆಪಿ ಹರಸಾಹಸ ಪಟ್ಟಿರುವುದು ಜನ ಕಂಡಿರುವ ಸತ್ಯ.
ಈಗಾಗಲೇ ಅಧಿಕಾರಕ್ಕೇರಿ ಮೂರೂವರೆ ವರ್ಷ ಕಳೆದ ರಾಜ್ಯ ಬಿಜೆಪಿ ಬರೇ ಆಂತರಿಕ ಕಚ್ಚಾಟದಲ್ಲಿ ದಿನಗಳೆಯುತ್ತಿರುವುದನ್ನು ಬಿಟ್ಟರೆ ಈ ರಾಜ್ಯದ ಮೇಲೆ ಹಿಂದೆಂದೂ ಕಂಡರಿಯದಷ್ಟು ಸಂಖ್ಯೆಯಲ್ಲಿ ಉಪಚುನಾವಣೆಗಳನ್ನು ಹೇರಿದ್ದೇ ಸಾಧನೆಯ ಪಟ್ಟಿಯಲ್ಲಿ ಕಂಡು ಬರುತ್ತಿದೆ. ಹೇಗೂ ಮೂರೂವರೆ ವರ್ಷದ ಅಧಿಕಾರ ಪರ್ವ ಪೂರೈಸಿದ ರಾಜ್ಯ ಬಿಜೆಪಿ ಸರಕಾರ ಬರೇ ವಿವಾದ, ಹಗರಣಗಳನ್ನೇ ಮೈಮೇಲೆ ಮೆತ್ತಿಕೊಂಡು ಇನ್ನೇನು ಬಂದೇ ಬಿಡುವ ಚುನಾವಣೆಯನ್ನು ಎದುರಿಸಲು ಮತದಾರ ಪ್ರಭುವಿನ ಬಳಿ ಹೇಗೆ ತಾನೆ ಹೋಗಲು ಸಾಧ್ಯ ಎಂಬ ಸತ್ಯವನ್ನು ಮನಗಂಡು ಇದೀಗ ಮತ್ತದೇ ಹಳೇ ಮಾರ್ಗಕ್ಕೆ ಮರಳುವ ಪ್ರಯತ್ನವನ್ನು ಮಾಡುತ್ತಿದೆ.
ತಾನೇ ಹಾಲೆರೆದು ಪೋಷಿಸಿಕೊಂಡು ಬಂದ ಮತೀಯ ಸಂಘಟನೆಗಳನ್ನು ಛೂ ಬಿಟ್ಟು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿ ಬಳಿಕ ಘಟನೆಗೆ ಯಾರ‍್ಯಾರನ್ನೋ ಬಲಿಪಶು ಮಾಡುವ ಮೂಲಕ ಬಹುಸಂಖ್ಯಾತರ ವೋಟ್ ಬ್ಯಾಂಕ್‌ಗೆ ಲಗ್ಗೆಯಿಡುವ ಪ್ರಯತ್ನವನ್ನು ಈಗಿಂದಲೇ ಚಾಲ್ತಿಯಲ್ಲಿಟ್ಟಿವೆ. ಅದರ ಭಾಗವಾಗಿದೆ ಇತ್ತೀಚೆಗೆ ನಡೆದ ಸುಳ್ಯ ಘಟನೆ ಹಾಗೂ ಸಿಂಧಗಿ ಘಟನೆ.
ಅನ್ಯ ಸರಕಾರಗಳು ಅಧಿಕಾರದಲ್ಲಿದ್ದಾಗ ಏನೇನೋ ಮಾಡಿ ಸರಕಾರ ಹಾಗೂ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕಾಯಕವನ್ನು ಮಾಡುತ್ತಾ ಸ್ವಾರ್ಥ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಇದೀಗ ತಮ್ಮದೇ ಪಕ್ಷದ ಅಧಿಕಾರದಲ್ಲಿದ್ದು, ತಮ್ಮ ಮತೀಯ ಸಂಘಟನೆಗಳ ಸಮಾಜ ಬಾಹಿರ ಕೃತ್ಯಗಳನ್ನು ಪೊಲೀಸ್ ಇಲಾಖೆ ಮುಚ್ಚಿಹಾಕಬೇಕೆಂದು ಸಹಜವಾಗಿಯೇ ಭಾವಿಸಿರುವ ವಿಘ್ನ ಸಂತೋಷಿಗಳು ತಮ್ಮ ರಾವಣಮುಖವನ್ನು ಅನಾವರಣಗೊಳಿಸುತ್ತಿರುವ ಪೊಲೀಸ್ ಇಲಾಖೆಯನ್ನೇ ಇದೀಗ ತನ್ನ ಟಾರ್ಗೆಟ್ ಮಾಡಿಕೊಂಡಿದೆ ಎಂದರೆ ಈ ರಾಜ್ಯದ ಪ್ರಜಾತಂತ್ರ ವ್ಯವಸ್ಥೆ ಅಪಾಯಕರ ಸನ್ನಿವೇಶವನ್ನೇ ಎದುರಿಸುವಂತಾಗಿದೆ.
ತಮ್ಮೆಲ್ಲ ಸಮಾಜಬಾಹಿರ ಕುಕೃತ್ಯಗಳನ್ನು ಅಲ್ಪಸಂಖ್ಯಾತ ಸಮುದಾಯದ ತಲೆಗೆ ಕಟ್ಟಿ ಅಮಾಯಕ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದ ಮಂದಿಗೆ ಇದೀಗ ಪೊಲೀಸರ ದಕ್ಷ ಕಾರ್ಯಾಚರಣೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ. ಮತೀಯ ಸಂಘಟನೆಗಳ ರಾಕ್ಷಸೀ ಕೃತ್ಯಕ್ಕೆ ಬೆಂಗಾವಲಾಗಿ ನಿಂತಿರುವ ರಾಜ್ಯ ಸರಕಾರ ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಇಲಾಖೆಯ ಕಾರ್ಯವೈಖರಿಗೆ ತಣ್ಣೀರೆರಚುವ ಕಾಯಕದಲ್ಲಿ ನಿರತವಾಗಿರುವುದು ನಿಜಕ್ಕೂ ಈ ರಾಜ್ಯದ ಪಂಚ ಕೋಟಿ ಕನ್ನಡಿಗರ ದುರದೃಷ್ಟವಲ್ಲದೆ ಮತ್ತೇನೂ ಅಲ್ಲ.
ವಿಶೇಷ ವರದಿ : ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್).

No comments:

Post a Comment