Sunday, 8 January 2012

ಫರಂಗಿಪೇಟೆಯಲ್ಲಿ ಗಾಂಜಾ ವ್ಯಸನಿಗಳ ತಲವಾರು ಕಾಳಗ : ಸ್ನೇಹಿತರಿಂದಲೇ ವ್ಯಕ್ತಿಯ ಇರಿದು ಕೊಲೆ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ವ್ಯಕ್ತಿಯೋರ್ವನನ್ನು ಇರಿದು ಕೊಲೆಗೈದ ಘಟನೆ ಗುರುವಾರ ಸಂಜೆ ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ನಡೆದಿದೆ. ಮೃತನನ್ನು ಕೇರಳ ತಲಶ್ಶೇರಿಯ ಅಡಗರ ನಿವಾಸಿ ಟಿ.ಜೆ. ಅಬ್ಬುಟ್ಟಿ ಅವರ ಪುತ್ರ ನೂರುದ್ದೀನ್ ಯಾನೆ ನೂರಾ (೩೨) ಎಂದು ಗುರುತಿಸಲಾಗಿದೆ.
ಮೃತ ನೂರುದ್ದೀನ್ ತನ್ನ ಸ್ನೇಹಿತರ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ವಾಗ್ವಾದ ನಡೆದು ಏಕಾಏಕಿ ಈತನ ತಲೆಯ ಹಿಂಭಾಗ ಹಾಗೂ ಸೊಂಟಕ್ಕೆ ಇರಿಯಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೊಲೆ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ನೌಶಾದ್, ಇಮ್ರಾನ್, ಹಫೀಝ್, ಬಿ.ಸಿ.ರೋಡಿನ ಹನೀಫ್ ಎಂದು ಹೆಸರಿಸಲಾಗಿದ್ದು ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಮೃತ ನೂರುದ್ದೀನ್ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದು, ಉರ್ವ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈತ ಕೇರಳ, ಕೋಟೆಕಾರು-ಬೀರಿ ಹಾಗೂ ಮಾರಿಪಳ್ಳದ ಒಟ್ಟು ಮೂವರನ್ನು ಮದುವೆಯಾಗಿದ್ದ. ಮೂರನೇ ಹೆಂಡತಿ ಮಾರಿಪಳ್ಳದ ಜಮೀಳ ಹಾಗೂ ಆಕೆಯ ಮೂವರು ಮಕ್ಕಳೊಂದಿಗೆ ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಗಾಂಜಾ ಸೇವಿಸಿ ಬೈದು ನಿಂದಿಸಿರುವುದೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
- ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್).

No comments:

Post a Comment