Saturday, 17 December 2011

ಪ್ರಮೋದ್ ಮುತಾಲಿಕ್ ಬೆಂಗಳೂರಿನಲ್ಲಿ ಬಂಧನ


ಪ್ರಮೋದ್ ಮುತಾಲಿಕ್ ಬೆಂಗಳೂರಿನಲ್ಲಿ ಬಂಧನ


ಬೆಂಗಳೂರು, ಡಿ. 16 :   ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶಕರಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮತ್ತು 7 ಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಕಾರಣ ನೀಡದೆ 2010-11ನೇ ಸಾಲಿನ ದೂರ ಶಿಕ್ಷಣ ಪರೀಕ್ಷೆಯನ್ನು ಮುಂದೂಡುತ್ತಿರುವುದನ್ನು ವಿರೋಧಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ದೂರ ಶಿಕ್ಷಣ ಇಲಾಖೆ ಕಚೇರಿಗೆ ಇಂದು ಮಧ್ಯಾಹ್ನ ದಾಳಿ ಮಾಡಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ನಿರ್ದೇಶಕರಾದ ನಿರಂಜನ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪರೀಕ್ಷೆ ಮುಂದೂಡಿದರೆ ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಬೆಂಕಿ ಹಚ್ಚುವುದಾಗಿಯೂ ಕಾರ್ಯಕರ್ತರು ಬೆದರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಪೊಲೀಸರು ಕಾನೂನನ್ನು ಕೈಗೆ ತೆಗೆದುಕೊಂಡ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿದರು.
ದೂರ ಶಿಕ್ಷಣ ಇಲಾಖೆಯ ನಿರ್ದೇಶಕರು ಪರೀಕ್ಷೆ ಸಕಾಲದಲ್ಲಿ ನಡೆಸದೆ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬಂದಿದ್ದವು. ಪರೀಕ್ಷೆ ಕಳೆದ ವಾರವೇ ನಡೆಯಬೇಕಾಗಿತ್ತು. ಆದರೆ, ಅದನ್ನು ಡಿ.26ಕ್ಕೆ ನಿರ್ದೇಶಕರು ಮುಂದೂಡಿದ್ದರು. ಅಂದು ನಡೆಯಬೇಕಿರುವ ಪರೀಕ್ಷೆಯನ್ನೂ ಮುಂದೂಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಿರ್ದೇಶಕರ ಮೇಲೆ ಸೇನೆ ದಾಳಿ ಮಾಡಿತ್ತು.
ಈ ಪರೀಕ್ಷೆ ಬರೆಯಲು ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಚಿತ್ರದುರ್ಗ, ಕೋಲಾರ, ದೊಡ್ಡಬಳ್ಳಾಪುರ ಮುಂತಾದ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಾರೆ. ಅವರಿಂದ ಪರೀಕ್ಷೆ ಶುಲ್ಕ ಪಡೆದಿದ್ದರೂ, ಪರೀಕ್ಷೆ ದಿನಾಂಕ ನಿಗದಿಪಡಿಸದೆ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ವಿಭಾಗ ತೊಂದರೆ ನೀಡುತ್ತಿದೆ ಎಂದು ದೂರುಗಳು ಬಂದಿದ್ದವು.

No comments:

Post a Comment