ನೆರವಾಗಿ…….ಹೀಗೊಂದು ವಿಜ್ಞಾಪನೆ,
Posted on December 16, 2011 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ಸುಖ-ದುಃಖ, ಸಂತೋಷ-ಸಂಕಷ್ಟಗಳು ಮಾನವ ಜೀವನದ ಎರಡು ಮುಖಗಳು. ಬದುಕಿನಲ್ಲಿ ಏಳು-ಬೀಳುಗಳು ಸಾಮಾನ್ಯ. ಕೆಲವೊಮ್ಮೆ ಬದುಕಿನ ಸಂಕಷ್ಟಗಳು ಬಂದು ಹೋದರೆ, ಇನ್ನು ಕೆಲವೊಮ್ಮೆ ಜೀವನ ಸಂಕಷ್ಟಗಳು ಕುಟುಂಬದ ಇಡೀ ಬದುಕನ್ನೇ ತಲ್ಲಣಗೊಳಿಸುತ್ತವೆ. ಬಡತನ ಹಾಗೂ ಕಾಯಿಲೆ ಒಟ್ಟೊಟ್ಟಾಗಿ ಒಂದು ಕುಟುಂಬವನ್ನು ಬಾಧಿಸುತ್ತಿರುವ ಕರುಣಾಜನಕ ಕಥೆ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿ ಸೈಟ್ ಎಂಬಲ್ಲಿಯ ನಿವಾಸಿ ಅಬ್ದುಲ್ ಖಾದರ್ ಎಂಬವರ ಹನ್ನೆರಡು ವರ್ಷದ ಬಾಲಕ ಸನಾವುದ್ದೀನ್ ಎಂಬಾತ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಈತನ ಚಿಕಿತ್ಸೆಗಾಗಿ ಈಗಾಗಲೇ ಸುಮಾರು ಹನ್ನೆರಡು ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಿದ ಈತನ ಪಾಲಕರು ಕಂಗಾಲಾಗಿದ್ದಾರೆ. ಮಾರಕ ರೋಗದಿಂದ ಬಳಲುತ್ತಿರುವ ಕರುಳ ಕುಡಿ ಒಂದೆಡೆಯಾದರೆ ಮತ್ತೊಂದೆಡೆ ಕಿತ್ತು ತಿನ್ನುತ್ತಿರುವ ಬಡತನ ಈ ಕುಟುಂಬದ ನೆಮ್ಮದಿಯನ್ನೇ ಅಲುಗಾಡಿಸಿದೆ.
ಚಿಕ್ಕ ವಯಸ್ಸಿನಲ್ಲೊಮ್ಮೆ ಬಾಲಕ ಸನಾವುದ್ದೀನ್ ಮೂತ್ರ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದು, ಆ ಸಂದರ್ಭದಲ್ಲಿ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದಾಗ ಬಾಲಕ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಿರುತ್ತದೆ. ಈಗಾಗಲೇ ಮೂರು ಶಸ್ತ್ರ ಚಿಕಿತ್ಸೆಗಳನ್ನು ಪೂರೈಸಿರುವ ಬಾಲಕ ಸನಾವುದ್ದೀನ್‌ನ ವೈದ್ಯಕೀಯ ಚಿಕಿತ್ಸೆಗೆ ಅಪಾರ ಮೊತ್ತದ ಹಣಕಾಸು ವ್ಯಯಿಸಲಾಗಿದೆ. ಇದೀಗ ಬಾಲಕನಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲು ವೈದ್ಯರು ಸಲಹೆ ನೀಡಿದ್ದು, ಚಿಕಿತ್ಸಾ ವೆಚ್ಚ ಸುಮಾರು ೩-೪ ಲಕ್ಷ ರೂಪಾಯಿಯಷ್ಟು ತಗಲಬಹುದು ಎಂದು ತಿಳಿಸಿರುತ್ತಾರೆ.
ಕಾಯಿಲೆ ಪೀಡಿತ ಬಾಲಕ ಸನಾವುದ್ದೀನ್ ಸೇರಿದಂತೆ ಅಬ್ದುಲ್ ಖಾದರ್‌ರಿಗೆ ನಾಲ್ಕು ಮಂದಿ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಎಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದು, ಸಣ್ಣ ತರಗತಿಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಅಬ್ದುಲ್ ಖಾದರ್ ಅವರ ಕೂಲಿ ವೃತ್ತಿಯಿಂದ ಬರುವ ಅಲ್ಪ ಪ್ರಮಾಣದ ಕೂಲಿ ವೇತನ ಮಾತ್ರ ಕುಟುಂಬ ಪಾಲನೆಗಿರುವ ಏಕಮಾತ್ರ ಆದಾಯವಾಗಿದ್ದು, ಇತರ ಯಾವುದೇ ಆದಾಯವೂ ಇವರ ಪಾಲಿಗಿರುವುದಿಲ್ಲ. ಕುಟುಂಬ ಪೋಷಣೆಯ ಜೊತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಬೇಕಾದ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಪುತ್ರ ಸನಾವುದ್ದೀನ್‌ಗೆ ಬಾಧಿಸಿರುವ ಕಿಡ್ನಿ ಕಾಯಿಲೆ ಅಬ್ದುಲ್ ಖಾದರ್ ಕುಟುಂಬದ ಮೇಲೆ ದುಃಖದ ಕರಾಳ ಹಸ್ತವನ್ನೇ ಚಾಚಿದೆ. ಈಗಾಗಲೇ ಸಹೃದಯಿ ದಾನಿಗಳ ನೆರವಿನಿಂದ ಹಾಗೂ ಅಲ್ಲಲ್ಲಿ ಸಾಲ ಮಾಡಿ ಮಗನಿಗೆ ಮೂರು ಶಸ್ತ್ರ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಚಿಕಿತ್ಸೆ ಒದಗಿಸಿ ಕಂಗಾಲಾಗಿರುವ ಅಬ್ದುಲ್ ಖಾದರ್ ಇದೀಗ ಮತ್ತೆ ಮಗನ ಚಿಕಿತ್ಸೆಗಾಗಿ ಹಣ ಹೊಂದಿಸುವ ಬಗ್ಗೆ ತೀವ್ರ ಚಿಂತಿತರಾಗಿರುತ್ತಾರೆ.
ಮಂಚಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಬಾಲಕ ಸನಾವುದ್ದೀನ್ ತನ್ನೆಲ್ಲ ಸಹಪಾಠಿಗಳಂತೆ ಸುಂದರ ಭವಿಷ್ಯದ ಕನಸುಗಳನ್ನು ಹೊತ್ತಿದ್ದು, ಅದಕ್ಕಾಗಿ ಬಾಲಕನ ಕಿಡ್ನಿ ಕಾಯಿಲೆಗೆ ತುರ್ತು ಚಿಕಿತ್ಸೆ ಅತ್ಯಾವಶ್ಯಕವಾಗಿದೆ. ಬಾಲಕ ಸನಾವುದ್ದೀನ್‌ಗೆ ಚಿಕಿತ್ಸೆ ನೀಡಿ ಪುಟಾಣಿಯ ಬಾಳನ್ನು ಬೆಳಗುವ ಅದಮ್ಯ ಬಯಕೆ ಪಾಲಕರಿಗಿದ್ದರೂ ಕುಟುಂಬವನ್ನು ಕಾಡುತ್ತಿರುವ ಬಡತನ ಎಲ್ಲದಕ್ಕೂ ತಣ್ಣೀರೆರಚುವ ಸಾಧ್ಯತೆಯಿದೆ. ಇದೀಗ ಕರುಳ ಕುಡಿಯ ಬಾಳನ್ನು ಬೆಳಗಿಸುವ ಇರಾದೆಯಲ್ಲಿರುವ ಅಬ್ದುಲ್ ಖಾದರ್ ಮಾನೀಯತೆಯ ಮಿಡಿತವಿರುವ, ಬಡವರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತಿಕೆ ಇರುವ ದಾನಿಗಳ ಆರ್ಥಿಕ ಸಹಕಾರವನ್ನು ಅಸಹಾಯಕತೆಯ ಕಣ್ಗಳಿಂದ ನಿರೀಕ್ಷಿಸುತ್ತಿದ್ದಾರೆ.
ತನ್ನ ಕೂಲಿ ವೃತ್ತಿಯಿಂದ ಬರುವ ಏಕಮಾತ್ರ ಆದಾಯವನ್ನು ಹೊಂದಿ, ಸಂಸಾರ ಪಾಲನೆ, ಮಕ್ಕಳ ವಿದ್ಯಾಭ್ಯಾಸದ ಹೊಣೆ ಹಾಗೂ ಪುತ್ರನ ಕಾಯಿಲೆಗೆ ಚಿಕಿತ್ಸೆ ನೀಡಬೇಕಾದ ಭಾರವಾದ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅಬ್ದುಲ್ ಖಾದರ್ ಕುಟುಂಬ ಬದುಕಿನ ಸಂತೋಷದಿಂದ ಕ್ಷಣ ಕ್ಷಣಕ್ಕೂ ಹಿಮ್ಮುಖವಾಗಿ ಚಲಿಸುತ್ತಿದೆ. ಬದುಕಿನ ಸಂತೋಷವನ್ನು ಕಳೆದುಕೊಳ್ಳುತ್ತಿರುವ ಬಾಲಕ ಸನಾವುದ್ದೀನ್ ಹಾಗೂ ಆತನ ಕುಟುಂಬಕ್ಕೆ ಸಾಂತ್ವನದ ಸಿಂಚನಗೈಯುವುದು ಉಳ್ಳವರ ಕರ್ತವ್ಯವಲ್ಲವೇ?
ಈ ನಿಟ್ಟಿನಲ್ಲಿ ಬಡವರ ಸಂಕಷ್ಟಗಳಿಗೆ ಮಿಡಿಯುವ ಉದಾರತೆಯ ಹೃದಯವಂತಿಕೆ ಇರುವವರು ಅಬ್ದುಲ್ ಖಾದರ್ ಅವರ ಕರ್ನಾಟಕ ಬ್ಯಾಂಕ್ ಮಂಚಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ : 9025 ಗೆ ತಮ್ಮ ಉದಾರತೆಯನ್ನು ಜಮೆ ಮಾಡಬಹುದು ಅಥವಾ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 7760731869 ಗೆ ಸಂಪರ್ಕಿಸಬಹುದು.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್).
Hameed bhai, n PMA brothers realy good job, Allah bless u n ur family.
ReplyDeleteguys comments plssss....
ReplyDelete