Posted on December 22, 2011 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ತಾಲೂಕಿನ ಪರ್ಲಿಯ ಸಮೀಪದ ವೈದ್ಯರ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಸಿಕಂದರ್ ಪಾಷಾ ಅವರ ಪರ್ಲಿಯದಲ್ಲಿರುವ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಎಂದಿನಂತೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಸಿಕಂದರ್ ಪಾಷಾ ದಂಪತಿ ತಮ್ಮ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಸಂಜೆಯ ವೇಳೆ ಶಾಲೆ ಬಿಟ್ಟು ಮಕ್ಕಳು ಮನೆಗೆ ಬಂದ ಸಂದರ್ಭ ಮನೆ ಕಿಟಕಿ ಬಾಗಿಲು ತರೆದಿದ್ದು, ತಕ್ಷಣ ಮಕ್ಕಳು ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಮಕ್ಕಳ ಮಾಹಿತಿಯಂತೆ ಡಾ. ಸಿಕಂದರ್ ಪಾಷಾ ಮನೆಗೆ ಬಂದಾಗ ಮನೆಯ ಮುಂಭಾಗದ ಕಿಟಕಿ ಬಾಗಲು ತೆರೆದಿದ್ದು, ಮುಖ್ಯ ಬಾಗಿಲ ಚಿಲಕ ಭದ್ರವಾಗಿತ್ತು. ಮನೆಯ ಹಿಂಭಾಗದ ಬಾಗಿಲು ತೆರೆದಿದ್ದು, ಸಾಮಾಗ್ರಿಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು. ಹಿಂದಿನಿಂದ ಒಳ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟು ಜಾಲಾಡಿ ಅದರಲ್ಲಿದ್ದ ಹತ್ತು ಗ್ರಾಂ ತೂಕದ ಕರಿಮಣಿ ಸೇರಿದಂತೆ ಒಟ್ಟು ಮೂವತ್ತು ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ೪೮ ಸಾವಿರ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಹಾಡುಹಗಲೇ ಕಳವು ನಡೆದಿದ್ದರೂ ಘಟನೆಯ ಬಗ್ಗೆ ಸ್ಥಳೀಯರಿಗೆ ಯಾವುದೇ ರೀತಿಯ ಸಂಶಯ ಮೂಡಿ ಬಂದಿಲ್ಲ. ಈ ಬಗ್ಗೆ ಶಂಶಯಿತರನ್ನು ವಶಕ್ಕೆ ತೆಗದುಕೊಂಡ ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್.ಪಿ. ಲಾಬೂರಾಂ ಭೇಟಿ ನೀಡಿದ್ದು, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಡಿ.ವೈ.ಎಸ್.ಪಿ., ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಬಂಟ್ವಾಳ ನಗರ ಠಾಣಾಧಿಕಾರಿ ಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್)
No comments:
Post a Comment